Nanna Nalavina balli

ನನ್ನ ನಲವಿನ ಬಳ್ಳಿ…..

ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ
ಲೋಕವೆ, ಹೀರದಿರು ದುಂಬಿಯೊಲು ಹೂವ;
ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ
ಚಣದೊಂದೆ ಕನಸಿದುವೆ, ಬೆರೆಸದಿರು ನೋವ.

                                          ನನ್ನ ನಲವಿನ ಬಳ್ಳಿ…..

ಸವಿ ಸುಖದೀ ಗಳಿಗೆ ಬಂದು ಮೆಲ್ಲಗೆ ಬಳಿಗೆ
ಪಲ್ಲವಿಸುತಿದೆ ಎದೆಯ ಚೈತ್ರದಂತೆ;
ಇಂದು ನಾ ಮೈ ಮರೆತು ಒಲೆಯುವೆ ಸೊಗ ಬೆರೆತು,
ಆಸೆಗಳ ಚಿವುಟದಿರು ಹಕ್ಕಿಯಂತೆ.

                                          ನನ್ನ ನಲವಿನ ಬಳ್ಳಿ…..

ಆಗಸಕೆ ಎಸೆದಿರುವ ಕಲ್ಲಿನಂತೇರುವೆನು,
ಗಾಳಿಯಲಿ ತೇಲುವೆನು – ಗಂಧದಂತೆ;
ಮತ್ತೆ ಬೀಳುವೆನಿಲ್ಲೆ, ಚಿಂತೆಗಳ ಕೆಸರಲ್ಲೆ –
ಬಿಟ್ಟುಬಿಡು ಈಗೆನ್ನ ಮುಕ್ತನಂತೆ.

                                          ನನ್ನ ನಲವಿನ ಬಳ್ಳಿ…..

                                                                                 – ಕೆ. ಎಸ್. ನಿಸಾರ್ ಅಹಮದ್ 

Leave a Reply

Your email address will not be published. Required fields are marked *